
Save My Sugar -Save Mandya...........ರೈತರ ಬದುಕಿನ ಆಸರೆ ಯಾಗಿರುವ ಮೈ ಶುಗರ್ ಕಾರ್ಖಾನೆಯನ್ನು ಕೂಡಲೇ ಆರಂಭ ಮಾಡಬೇಕು


1933 ರಲ್ಲಿ ಕೆನಡಾ ಮೂಲದ ಲೆಸ್ಸಿ ಕೋಲ್ಮನ್ VC ಫಾರಂ ಜೊತೆಗೆ ಮಂಡ್ಯದ ಹಳ್ಳಿ ಹಳ್ಳಿ ತಿರುಗಿ ಈ ಭಾಗದ ಜನರ ಭವಣೆನೀಗಿಸಲು ಸರ್ ಎಂ ವಿಶ್ವೇಶ್ವರಯ್ಯ ರವರೊಟ್ಟಿಗೆ ಸ್ಥಾಪನೆ ಮಾಡಿದಂತಹ ಏಷ್ಯದ ಪ್ರಖ್ಯಾತ ಸಕ್ಕರೆ ಕಾರ್ಖಾನೆ ಈ ನಮ್ಮ ಮೈ ಶುಗರ್ ಕಾರ್ಖಾನೆ , ಮೊದಲು ಮುಂಬೈ ನಲ್ಲಿ ಬಸ್ ನಡೆಸಲು ಈ ಈ ಕಾರ್ಖಾನೆಯಿಂದಲೇ ಎಥನಾಲ್ ಸರಬರಾಜಾಗುತ್ತಿತ್ತು , ಇಂತಹ ಹಿನ್ನಲೆ ಇರುವ ಈ ಸಂಸ್ಥೆ ಇತ್ತೀಚಿನ ದಿನದಲ್ಲಿ, ಜನ ಪ್ರತಿನಿದಿಗಳು ಮತ್ತು ಸರ್ಕಾರದ ದಿವ್ಯ ನಿರ್ಲಕ್ಷ್ಯ ಕ್ಕೆ ಒಳಗಾಗಿ ಸಾಲದ ಸುಲಿಗೆ ಸಿಲುಕಿ ಇಂದು ಕೋಮಾ ಸ್ಥಿತಿಗೆ ತಲುಪಿದೆ, ಸಾಲದ ಹೊರೆಯಿಂದ ಮುಕ್ತಿಗೊಳಿಸಿ ರೋಗಗ್ರಸ್ತವೆಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಮೈಶುಗರ್ ಕಾರ್ಖಾನೆಯನ್ನು ತುರ್ತು ನಿಗಾ ಘಟಕದಿಂದ ಹೊರ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡದೆ ಬದಲಾಗಿ ಸಕ್ಕರೆ ಲಾಭಿಗೆ ಮಣಿದು ಅದನ್ನು ಖಾಸಾಗಿಯವರಿಗೆ ಮಾರಾಟ ಮಾಡುವ ಷಡ್ಯಂತ್ರ ನಡೆಸುತ್ತಿರುವುದು ಖಂಡನೀಯ,
ರಾಜ್ಯ ಸರ್ಕಾರ ಕೇವಲ ಬುಟಾಟಿಕೆಗೆ ಮೈಶುಗರ್ ಕಾರ್ಖಾನೆ ಪುನಶ್ಚೇತನಕ್ಕೆ 27 ಕೋಟಿ ರುಪಾಯಿ ಮಂಜೂರು ಮಾಡಿದ್ದು ಈ ವರೆವಿಗೆ ಕಿಲುಬು ಕಾಸು ಕಾರ್ಖಾನೆಗೆ ಬಳಸಿಲ್ಲ , ಕೇಂದ್ರ ಸರ್ಕಾರ ಕಬ್ಬಿಗೆ ಎಫ್ ಆರ್ ಪಿ ದರವನ್ನು ನಿಗದಿ ಮಾಡಿದ್ದರೂ ಅದನ್ನು ರೈತರಿಗೆ ಕೊಡಿಸುವ ಗಂಡೆದೆಯನ್ನು ಪ್ರಧರ್ಶನ ಮಾಡದೆ ಇಂದು ಸಕ್ಕರೆ ಲಾಭಿಗೆ ಮರುಳಾಗಿ ಕೈಗೊಂಬೆ ಯಂತಾಗಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ ಹಿಡಿದಂತಿದೆ , ಅದಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಿದ್ದರಿದ್ದರೂ ಕೂಡ ಅವರಿಗೆ ಸ್ಥಳೀಯ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು ವರ್ಗಾವಣೆ ಭಾಗ್ಯ ಕರುಣಿಸಿರುವುದು ಶೋಚನೀಯ.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಒತ್ತಾಯಿಸಿ ಹಲವಾರು ಸಂಘಟನೆಗಳು ನಿರಂತರವಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಸರ್ಕಾರ ಕ್ಯಾರೆ ಎನ್ನದೆ , ತನ್ನ ಮೊಂಡುತನ ತೋರುತ್ತಿದ್ದು ನಮ್ಮ ದೌರ್ಭಾಗ್ಯ , ಸರ್ಕಾರಕ್ಕೆ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿದ್ದು , ರೈತರ ಕೂಗು ಕೇಳಿಸುತ್ತಿಲ್ಲ , ಬಡವರ ಕಷ್ಟ ಕಾಣುತ್ತಿಲ್ಲ , ಸರ್ಕಾರ ಅದಿಕಾರದ ಚುಕ್ಕಾಣಿ ಹಿಡಿದು ಮೂರು ವರ್ಷಗಳಾಗಿದ್ದು , ಜಿಲ್ಲೆಯ ರೈತರ ಭವಿಷ್ಯ ವನ್ನು ನುಚ್ಚು ನೂರು ಮಾಡಹೊರಟಿರುವುದು ರಾಜ್ಯ ಸರ್ಕಾರದ ರೈತವಿರೋಧಿ ನೀತಿಯನ್ನು ಎತ್ತಿ ತೋರುತ್ತಿದೆ , ಮಂಡ್ಯ ಜಿಲ್ಲೆಯ ಜೀವನಾಡಿ ಮೈ ಶುಗರ್ ಕಾರ್ಖಾನೆ ಆರಂಭವಾಗದೆ, ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ , ಅಮಾಯಕ ರೈತರು ಮುಂದೆ ಆತ್ಮ ಹತ್ಯೆ ಮಾಡಿಕೊಂಡರೆ ರಾಜ್ಯ ಸರ್ಕಾರವೇ ನೇರ ಹೊಣೆ
ರಾಜ್ಯ ಸರ್ಕಾರ ಪದೆ ಪದೆ ಸಕ್ಕರೆ ಕಾರ್ಖಾನೆ ಆರಂಭ ಮಾಡಲು ವಾಯಿದೆ ಹೇಳುತ್ತಾ ಬಂದಿದ್ದು , ಎಲ್ಲವೂ ಕೂಡ ಇಂದು ಸುಳ್ಳಾಗಿದೆ , ಕರ್ನಾಟಕ ರಾಜ್ಯದಲ್ಲಿ ಸರಕಾರಿ ಸೌಮ್ಯದ ಮಂಡ್ಯ ಸಕ್ಕರೆ ಕಾರ್ಖಾನೆ ರೈತರಿಗೆ ನೀಡುವ ಕಬ್ಬಿನ ದರವನ್ನು ಇತರೆ ಖಾಸಾಗಿ ಕಾರ್ಖಾನೆಗಳು ನೀಡಿಕೊಂಡು ಬರುತ್ತಿರುವುದು ಬಹಳ ಹಿಂದಿನ ವಾಡಿಕೆಯಾಗಿದ್ದು , ಇದನ್ನು ಸಹಿಸಲಾಗದ ಖಾಸಾಗಿ ಕಾರ್ಖಾನೆ ಮಾಲೀಕರು ಇದನ್ನು ಶತಾಯ ಗತಾಯ ಶಾಶ್ವತವಾಗಿ ಮುಚ್ಚಿಸುವ ಕುತಂತ್ರ ಮಾಡುತ್ತಿವೆ , ರಾಜ್ಯ ಸರ್ಕಾರವು ಕೂಡ ಕಾರ್ಖಾನೆ ಮಾಲೀಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ,
ಜಿಲ್ಲೆಯ ರೈತರು ಬ್ಯಾಂಕ್ ಸಾಲ ತೀರಿಸಲಾಗದ್ದರಿಂದ, ಶೇ 4ರ ಬಡ್ಡಿ ಸಾಲ ಶೇ 12ಕ್ಕೆ ಏರಿರುತ್ತದೆ. ಅಸಲಿನ ಜೊತೆ ಬಡ್ಡಿ, ಚಕ್ರಬಡ್ಡಿ ಹನುಮನ ಬಾಲದಂತೆ ಬೆಳೆಯುತ್ತಾ ಹೋಗಿದೆ . ಇತ್ತೀಚಿನ ದಿನಗಳು ಮಂಡ್ಯದ ರೈತರ ಪಾಲಿಗೆ ಅತ್ಯಂತ ಸಂಕಷ್ಟದ ದಿನಗಳಾಗಿವೆ . ಅತ್ತ ಹಳೆಯ ಸಾಲ ತೀರಿಸದ ಹೊರತು ಬ್ಯಾಂಕ್ ಹೊಸ ಸಾಲ ನೀಡುವುದಿಲ್ಲ. ಇತ್ತ ಬಿತ್ತನೆ ಖರ್ಚಿಗೆ ಹಣ ಇರುವುದಿಲ್ಲ. ಹಾಗಾಗಿ ಸ್ಥಳೀಯವಾಗಿ ಸಾಕಷ್ಟು ಕೈಸಾಲ ಮಾಡಿಕೊಳ್ಳುತಿದ್ದಾರೆ . ಸ್ವಸಹಾಯ ಸಂಘಗಳಿಂದಲೂ ಸಾಲ ತರುತ್ತಾರೆ. ಹೀಗೆ ರೈತರು ಅವರ ಅರಿವಿಗೆ ಬರದಂತೆಯೇ ಸಾಲದ ಕೂಪಕ್ಕೆ ಬೀಳುತ್ತಿದ್ದಾರೆ , ಹಾಗಾಗಿ ಈ ಭಾಗದ ರೈತರ ಬದುಕಿನ ಆಸರೆ ಯಾಗಿರುವ ಮೈ ಶುಗರ್ ಕಾರ್ಖಾನೆಯನ್ನು ಕೂಡಲೇ ಆರಂಭ ಮಾಡಬೇಕು
ಸಿ.ಟಿ ಮಂಜುನಾಥ್ ಮಂಡ್ಯ
Comment